ಬಂಗಾಲದಲ್ಲಿ ಆಳಿದ ಒಬ್ಬ ಸುಲ್ತಾನ. ಷಂಸ್-ಉದ್-ದೀನ್ ಫಿರೋಜ಼ನ ಒಬ್ಬ ಮಗ. ತಂದೆ ಬದುಕಿರುವಾಗಲೇ ಇವನೂ ಇವನ ಸೋದರರಲ್ಲೊಬ್ಬರಾಗಿದ್ದ ಷಿಹಾಬ್-ಉದ್-ದೀನ್ ಬುಘ್ದಾನೂ ಅನುಕ್ರಮವಾಗಿ ಸೊನಾರ್ಗಾವ್ ಮತ್ತು ಲಖ್ನಾವತಿಗಳಲ್ಲಿ ದಂಗೆಯೆದ್ದರು (1310-14). ಫಿರೊeóï 1315ರಲ್ಲಿ ಲಖ್ನಾವತಿಯ ಮೇಲೆ ತನ್ನ ಹತೋಟಿ ಸ್ಥಾಪಿಸಿದನಾದರೂ 1317-18ರಲ್ಲಿ ಷಿಹಾಬ್-ಉದ್-ದೀನ್ ಅದನ್ನು ಆಳುತ್ತಿದ್ದ. 1322ರಲ್ಲಿ ಅಥವಾ ಅನಂತರ ಫಿರೊeóï ತೀರಿಕೊಂಡಾಗ ನಾಸಿರ್-ಉದ್-ದೀನ್ ಮತ್ತು ಷಿಹಾಬ್-ಉದ್-ದೀನರನ್ನು ಬಿಟ್ಟು ಬಹುಶಃ ಉಳಿದೆಲ್ಲ ಸೋದರರನ್ನೂ ಷಿಹಾಬ್-ಉದ್-ದೀನ್ ಷಾ ಕೊಂದು ಲಖ್ನಾವತಿ ಮತ್ತು ಸೊನಾರ್ ಗಾವ್ ಎರಡರಲ್ಲೂ ಆಳತೊಡಗಿದ.

ಫಿರೋeóï ಷಾನ ಮರಣಾನಂತರ ಷಿಹಾಬ್-ಉದ್-ದೀನ್ ಸಿಂಹಾಸನವನ್ನೇರಿದ ನೆಂದೂ ಆದರೆ ಷಾಹನ ಕೊನೆಯ ಮಗ ಘಿಯಾಸ್-ಉದ್-ದೀನ್ ಬಹುದುರ್ ಬುರಾ (ಕಪ್ಪು) ಸಿಂಹಾಸನವನ್ನಾಕ್ರಮಿಸಿಕೊಂಡು ತನ್ನ ಬಹುತೇಕ ಸೋದರರನ್ನು ಕೊಂದನೆಂದೂ ಅವನ ಸೋದರರಲ್ಲಿ ಇಬ್ಬರಾದ ಷಿಹಾಬ್-ಉದ್-ದೀನ್ ಮತ್ತು ನಸೀರ್-ಉದ್-ದೀನ್ ದೆಹಲಿಯ ಸುಲ್ತಾನ ಘಿಯಾಸ್-ಉದ್-ದೀನ್ ತುಘಲಕ್ನ ಬಳಿಗೆ ಓಡಿಹೋದರೆಂದೂ ತುಘಲಕ್ ಅವರೊಂದಿಗೆ ಘಿಯಾಸ್-ಉದ್-ದೀನ್ ಬಹಾದುರನ ಮೇಲೆ ದಂಡೆತ್ತಿ ಹೋದನೆಂದೂ ಇಬ್ನ್ ಬತೂತ ಬರೆದಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಬೇರೆ ಯಾವ ಆಧಾರಗಳೂ ಇಲ್ಲ. ಲಖ್ನಾವತಿಯ ಕೆಲವು ಆಸ್ಥಾನಿಕರು ತಾವು ಪಡುತ್ತಿದ್ದ ಪಾಡನ್ನು ಕುರಿತು ದೆಹಲಿಯ ಸುಲ್ತಾನನಿಗೆ ದೂರು ಹೊತ್ತರೆಂದೂ ಘಿಯಾಸ್-ಉದ್-ದೀನನ ದಬ್ಬಾಳಿಕೆಯನ್ನು ಕೊನೆಗೊಳಿಸಲು ಸುಲ್ತಾನ ದಂಡೆತ್ತಿ ಹೋದನೆಂದೂ ಬರನೀ ಹೇಳುತ್ತಾನೆ.

ಅಂತೂ ದೆಹಲಿಯ ಸುಲ್ತಾನ ಬಂಗಾಲದ ಮೇಲೆ ತನ್ನ ಒಡೆತನ ಸ್ಥಾಪಿಸಲು 1324ರಲ್ಲಿ ದಂಡೆತ್ತಿ ಹೋದ. ಅವನ ಸೇನೆ ಲಖ್ನಾವತಿಯನ್ನು ತಲುಪಿದಾಗ ಬಹಾದುರ್ ನಗರದಿಂದ ಹೊರಬಂದು ದೆಹಲಿಯ ಸೇನೆಯೊಂದಿಗೆ ಕಾದಿದ. ಅವನಿಗೆ ಸೋಲಾಯಿತು. ಓಡಿ ಹೋಗಲು ಯತ್ನಿಸಿ ಅವನು ಸೆರೆಸಿಕ್ಕಿದ. ದೆಹಲಿಯ ಸಾಮಂತನಾಗಿ ನಸೀರ್-ಉದ್-ದೀನ್ ಲಖ್ನಾವತಿಯಿಂದ ಆಳತೊಡಗಿದ.

ಬಂಗಾಲದಿಂದ ಹಿಂದಿರುಗುತ್ತಿದ್ದಾಗ ಘಿಯಾಸ್-ಉದ್-ದೀನ್ ತುಘಲಕ್ ದುರಂತಕ್ಕೀಡಾದ. ಮಹಮ್ಮದ್-ಬಿನ್-ತುಘಲಕ್ ದೆಹಲಿಯ ಸುಲ್ತಾನನಾದ ಮೇಲೆ ಬಹಾದುರನನ್ನು ಬಿಡುಗಡೆ ಮಾಡಿ, ತನ್ನ ಸಾಮಂತನಾಗಿ ಸೊನಾರ್ ಗಾವ್ನಿಂದ ಆಳಲು ಅವನಿಗೆ ಅವಕಾಶ ನೀಡಿದನೆಂದೂ ಜೊತೆಗೆ ಬಹ್ರಾಂ ಖಾನನನ್ನು ತನ್ನ ಪ್ರತಿನಿಧಿಯಾಗಿ ಅಲ್ಲಿಟ್ಟನೆಂದೂ ತಿಳಿದುಬರುತ್ತದೆ. ಸುಮಾರು ಮೂರು ವರ್ಷಗಳ ಕಾಲ, 1327-28ರವರೆಗೆ, ಅವನು ಬಹ್ರಾಂ ಖಾನನೊಂದಿಗೆ ಸ್ನೇಹವಾಗಿ ಆಡಳಿತ ನಡೆಸಿದನಲ್ಲದೆ ತನ್ನ ಮತ್ತು ಮಹಮ್ಮದ್-ಬಿನ್-ತುಘಲಕನ ಹೆಸರಿನಲ್ಲಿ ಸಂಯುಕ್ತವಾಗಿ ನಾಣ್ಯಗಳನ್ನು ಚಲಾವಣೆಗೆ ತಂದ, ಆದರೆ ದೆಹಲಿಯ ಸುಲ್ತಾನನಿಗೆ ಅಧೀನನಾಗಿಯೇ ಮುಂದುವರಿಯಲೊಲ್ಲದೆ, ಅವನಿಂದ ಸ್ವತಂತ್ರನಾಗಲು ಸಮಯ ಕಾಯುತ್ತಿದ್ದ. ಅವನ ಅಣ್ಣ ನಸೀರ್-ಉದ್-ದೀನ್ನನನ್ನು ಸುಲ್ತಾನ ಪದಚ್ಯುತನನ್ನಾಗಿ ಮಾಡಿದಾಗ ಘಿಯಾಸ್-ಉದ್-ದೀನ್ ಬಹಾದುರ್ ಷಾ ತನಗೂ ಆ ಪಾಡು ಬರದಿರಲೆಂದು ಸ್ವಾತಂತ್ರ್ಯ ಗಳಿಸಲು ಯತ್ನಿಸಿದ. ಬಹ್ರಾಂ ಖಾನ್ ಇವನನ್ನು ಸೋಲಿಸಿ ಕೊಂದು, ಇವನ ಚರ್ಮವನ್ನು ಸುಲಿದು ದೆಹಲಿಯ ಸುಲ್ತಾನನಿಗೆ ಕಳಿಸಿದನೆಂದು ಈಸಾಮೀ ಎಂಬ ಚರಿತ್ರಕಾರ ಬರೆಯುತ್ತಾನೆ. ಆದರೆ ಬಹ್ರಾಂ ಖಾನ್ ಇವನನ್ನು ಕೊಲ್ಲಲಿಲ್ಲವೆಂದೂ ಕೆಲವು ಷರತ್ತುಗಳನ್ನು ವಿಧಿಸಿ ಸುಲ್ತಾನ ಇವನನ್ನು ಬಿಡುಗಡೆ ಮಾಡಿದನೆಂದೂ ಫಿಯಾಸ್-ಉದ್-ದೀನ್ ತನ್ನ ಮಗನನ್ನು ದೆಹಲಿಯಲ್ಲಿ ಒತ್ತೆಯಾಗಿಡಬೇಕೆಂಬುದು ಷರತ್ತುಗಳಲ್ಲೊಂದೆಂದೂ ಈ ಷರತ್ತನ್ನು ಘಿಯಾಸ್-ಉದ್-ದೀನ್ ಪಾಲಿಸದಿದ್ದಾಗ ಸುಲ್ತಾನ ಇವನ ವಿರುದ್ಧ ಸೈನ್ಯ ಕಳಿಸಿದನೆಂದೂ ಇಬ್ನ್ ಬತೂತ ಬರೆದಿದ್ದಾನೆ. ಬಹಾದುರನ ಮರಣಾನಂತರ ಹತ್ತು ವರ್ಷಗಳ ಕಾಲ ಬಂಗಾಲ ದೆಹಲಿಗೆ ಅಧೀನವಾಗಿತ್ತು. ಅಲ್ಲಿ ಶಾಂತ ಪರಿಸ್ಥಿತಿಯಿತ್ತು.	     	 	(ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ